ಮರ್ಕೇಟರ್, ಜೆರಾರ್ಡಸ್
1512-94. ಫ್ಲೆಮಿಶ್ ಭೂಗೋಳಶಾಸ್ತ್ರಜ್ಞ. ಈಗ ಬೆಲ್ಜಿಯಮ್ಮಿನಲ್ಲಿರುವ ರೂಪೆಲ್‍ಮಾಂಡ್‍ನಲ್ಲಿ 1512 ಮಾರ್ಚ್ 5ರಂದು ಜನನ, ಜರ್ಮನಿಯ ಡೂಯಿಸ್‍ಬಗ್‍ನಲ್ಲಿ 1594 ಡಿಸೆಂಬರ್ 5ರಂದು ಮರಣ. ಈತನ ಮೂಲನಾಮ ಗೆರ್‍ಹಾರ್ಡ್‍ಕ್ರೆಮರ್ ಎಂದಿತ್ತು. ಆದರೆ 16ನೆಯ ಶತಮಾನದಲ್ಲಿ ಪ್ರಚಲಿತವಾಗಿದ್ದ ಸಂಪ್ರದಾಯಾನುಸಾರ ಇದನ್ನು ಲ್ಯಾಟಿನೀಕರಿಸಿ ಜೆರಾರ್ಡಸ್ ಮಕೋಟರ್ ಎಂಬುದಾಗಿ ರೂಪಾಂತರಿಸಿಕೊಂಡ.

	ಸಪ್ತಸಾಗರಗಳ ಯಾನ ಆ ದಿನಗಳ ಮಹಾ ಸವಾಲು. ತನ್ನ ದೇಶದ (ನೆದರ್ಲೆಂಡ್ಸ್) ನೌಕಾಸಾಹಸಗಳ ರೋಮಾಂಚಕ ವರ್ಣನೆಗಳಿಂದ ಉದ್ದೀಪಿತನಾಗಿದ್ದ ಬಾಲಕ ಮರ್ಕೇಟರ್ ಸಹಜವಾಗಿಯೇ ಆ ದಿಶೆಯಲ್ಲಿ ಹಲವಾರು ಕನಸುಗಳನ್ನು ಕಾಣತೊಡಗಿದ ಆಗ ಅವಶ್ಯವಾಗಿದ್ದದ್ದು ಜಲ ನೆಲ ವಿಸ್ತಾರಗಳನ್ನು ನಿಷ್ಕøಷ್ಟವಾಗಿ ನಿರೂಪಿಸಬಲ್ಲ ಭೂಪಟಗಳು. ಸಾಗರದ ಅಪಾರ ವೈಶಾಲ್ಯದಲ್ಲಿ ಗುರಿಯನ್ನು ನಿಖರವಾಗಿ ನಿರ್ಧರಿಸದಿದ್ದರೆ ವೃಥಾ ಜನ ಧನ ಹಾನಿ ಆಗುವುದು ಖಾತ್ರಿ. ಇದನ್ನು ನಿವಾರಿಸಲು ಇದ್ದ ಒಂದು ಉಪಾಯವೆಂದರೆ ನಮ್ಮ ನೆಲೆ ಮತ್ತು ಉದ್ದೇಶಿತ ಗುರಿ ಎರಡರ ಬಗೆಗೂ ಖಚಿತವಾದ ಪೂರ್ವಭಾವಿ ಜ್ಞಾನ. ಭೂಪಟಗಳ ಪಾತ್ರ ಹೀಗೆ ಮಹತ್ತ್ವ ಪಡೆಯುತ್ತದೆ. ಅನ್ವೇಷಕ ಮಾನವನ ಸಂಚಾರಕ್ಷೇತ್ರ ಸೀಮಿತವಾಗಿದ್ದಾಗ ನಿಖರ ಭೂಪಟಗಳ ಆವಶ್ಯಕತೆ ಅಷ್ಟೇನೂ ತೀವ್ರವಾಗಿರಲಿಲ್ಲ. ಮಟ್ಟಸ ನೆಲದ ಮಾನಕಾನುಸಾರ ಯಥಾ ರೂಪ ಚಿತ್ರಣ ಸಾಗುತ್ತಿತ್ತು. ಆದರೆ ಸಂಚಾರಕ್ಷೇತ್ರ ಕ್ರಮೇಣ 16ನೆಯ ಶತಮಾನದಲ್ಲಿಯಂತೆ ಪ್ರಪಂಚವ್ಯಾಪ್ತಿ ಗಳಿಸಿದಾಗ ನಿಖರ ಭೂಪಟಗಳು ನಾವಿಕರ ಅವಿಭಾಜ್ಯ ಒಡನಾಡಿಗಳಾದುವು. ಭೂಪಟವನ್ನು ಓದಿ ನೆಲದ ಬಗೆಗಿನ ಮಾಹಿತಿಗಳನ್ನು ಕರಾರುವಾಕ್ಕಾಗಿ ನಿಷ್ಕರ್ಷಿಸಿ ತದನುಗುಣವಾಗಿ ಯಾನವನ್ನು ಯೋಜಿಸುವುದು ಅನಿವಾರ್ಯವಾಯಿತು.

ಚಿತ್ರ-1

	ನಿಖರ ಭೂಪಟವನ್ನು ತಯಾರಿಸುವುದು ಹೇಗೆ? ಇದು ಮರ್ಕೇಟರನ ಎದುರಿದ್ದ ಪ್ರಶ್ನೆ. ಮೂರು ಆಯಾಮಗಳ ಗೋಳಾಕಾರದ ಭೂಮಿಯ ವಿವರಗಳನ್ನು ಎರಡು ಆಯಾಮಗಳ ಕಾಗದದ ಮಟ್ಟಸ ತಳದ ಮೇಲೆ ವಿವರಗಳಿಗೆ ವಿಶೇಷ ಊನ ಬರದಂತೆ ಸಂಕ್ಷೇಪಿಸುವುದು ಹೇಗೆ? (ತದ್ರೂಪ ಚಿತ್ರಣ ಅಸಾಧ್ಯ.) ಪ್ರಯತ್ನ -ವೈಪಲ್ಯ -ಚಿಂತನೆ ಫಲವಾಗಿ ಈತ ಮರ್ಕೇಟರ್ ವಿಕ್ಷೇಪಣೆ ಎಂದು ಪ್ರಸಿದ್ಧವಾಗಿರುವ ಭೂಪಟ ನಿರ್ಮಾಣ ವಿಧಾನವನ್ನು ಆವಿಷ್ಕರಿಸಿದ. ಇದರ ಸಾರಂಶವಿಷ್ಟು: ಭೂಗೋಳವನ್ನು ಸಮ ಭಾಜಕದ ನೇರ ಸ್ಪರ್ಶಿಸುವ ಉರುಳೆಯೊಳಗೆ ಇಡಬೇಕು: ಭೂಕೇಂದ್ರದಿಂದ ತ್ರಿಜ್ಯಗಳನ್ನು ಎಳೆದು ಇವು ಉರುಳೆಯ ಒಳಮೈಯನ್ನು ಸಂಧಿಸುವವರೆಗೂ ವಿಸ್ತರಿಸಬೇಕು; ಆಗ ಸಾಮಾನ್ಯವಾಗಿ ಭೂಮಿಯ ಮೇಲ್ಮೈಯ ಪ್ರತಿಯೊಂದು ಬಿಂದುವಿಗೂ ಸಂವಾದಿಯಾಗಿ ಇನ್ನೊಂದು ಬಿಂದು ಉರುಳೆಯ ಮೈಯಲ್ಲಿ ಬಿಂಬಿಸಲ್ಪಡುವುದು; ಈಗ ಉರುಳೆಯನ್ನು ಅದರ ಒಂದು ಜನರೇಖೆಯ (ಅಕ್ಷಕ್ಕೆ ಸಮಾಂತರವಾಗಿ ಮೇಲ್ಮೈಯ ರೇಖೆ-ಜನರೇಟರ್) ನೇರ ಕತ್ತರಿಸಿ ಬಿಡಿಸಿದರೆ ಆಯತಾಕಾರದ ಹಾಳೆ ದೊರೆಯುತ್ತದೆ. ಇದರ ಮೇಲೆ ಭೂಮಿಯ ವಿಕ್ಷೇಪಿತ ಚಿತ್ರ ಮೂಡಿರುತ್ತದೆ. ಇದರಲ್ಲಿ ಭೂಮಿಯ ಉತ್ತರ ಹಾಗೂ ದಕ್ಷಿಣ ಮೇರುಗಳು  ಪಡಿಮೂಡಿರುವುದಿಲ್ಲ. ಅಲ್ಲದೇ ಅಕ್ಷಾಂಶ ಮತ್ತು ರೇಖಾಂಶ ವೃತ್ತಗಳು ಸಮಾಂತರ ರೇಖೆಗಳಾಗಿರುತ್ತವೆ. ಉತ್ತರ ಅಥವಾ ದಕ್ಷಿಣಕ್ಕೆ ಹೋದಂತೆ ಪ್ರದೇಶಗಳು ಅತಿಶಯವಾಗಿ ಲಂಬಿಸಲ್ಪಟ್ಟು ಭೂಪಟಕ್ಕೂ ಭೂಮಿಗೂ ನಡುವಿನ ಸಂವಾದಿತ್ವ ಕಳೆದುಹೋಗುತ್ತದೆ. ಉದಾಹರಣೆಗೆ ವಸ್ತುತಃ ಗ್ರೀನ್‍ಲೆಂಡಿನ ವಿಸ್ತಾರ ಆಫ್ರಿಕ ಖಂಡದ ಆರನೆಯ ಒಂದರಷ್ಟಿದ್ದರೂ ಮರ್ಕೇಟರ್ ವಿಕ್ಷೇಪಣೆಯಲ್ಲಿ ಅದು ಸರಿ ಸುಮಾರು ಆಫ್ರಿಕದಷ್ಟೇ ವಿಸ್ತಾರದ್ದಾಗಿ ಕಾಣುತ್ತದೆ. ಈ ನ್ಯೂನತೆಗಳಿಗೆ ತಕ್ಕ ತಿದ್ದುಪಡಿ ಒದಗಿಸಿಕೊಂಡು ಓದಿದರೆ ಮರ್ಕೇಟರ್ ಭೂಪಟ ಬಹುತೇಕ ನಿಜ ಚಿತ್ರವನ್ನು ಒದಗಿಸುವಲ್ಲಿ ಸಫಲವಾಗುತ್ತದೆ. 

	ಮರ್ಕೇಟರ್ ತನ್ನ ಕೊನೆಯ ದಿನಗಳಲ್ಲಿ ಯೂರೋಪ್ ಖಂಡದ ವಿವಿಧಭಾಗಗಳ ಬಿಡಿ ಭೂಪಟಗಳನ್ನು ತಯಾರಿಸುವುದರಲ್ಲಿ ಮಗ್ನನಾಗಿದ್ದ. ಇಂಥ ಪಟಗಳನ್ನು ಸಂಕಲ್ಪಿಸಿದ ಪುಸ್ತಕದ ಮೇಲೆ ಅಟ್ಲಾಸನ (ಗ್ರೀಕರ ಕಲ್ಪನೆಯ ಪ್ರಕಾರ ಭೂಮಿಯನ್ನು ತನ್ನ ಹೆಗಲ ಮೇಲೆ ಹೊತ್ತವ-ನಮ್ಮ ಕೂರ್ಮ ಅಥವಾ ವರಾಹದಂತೆ) ಚಿತ್ರವಿದ್ದುದರಿಂದ ಕ್ರಮೇಣ ಪುಸ್ತಕಕ್ಕೆ ಅಟ್ಲಾಸ್ ಎಂದು ಹೆಸರು ರೂಢಿಗೆ ಬಂದಿತು.

ಚಿತ್ರ-2

ಮರ್ಕೇಟರನ ಆಗಮನದೊಂದಿಗೆ ಗ್ರೀಕ್ ಯುಗದ ಅಪೂರ್ಣ ಮಾಹಿತಿಯ ಅಸಮಗ್ರ ಹಾಗೂ ಅವೈಜ್ಞಾನಿಕ ಭೂಪಟ ನಿರ್ಮಾಣ ವಿಧಾನ ಕೊನೆಗೊಂಡು ಆಧುನಿಕ ವೈಜ್ಞಾನಿಕ ವಿಧಾನ ಚಾಲ್ತಿಗೆ ಬಂದಿತು. ಹೀಗೆ ಈತ ಪ್ರಾಚೀನ ಹಾಗು ಅರ್ವಾಚೀನ ವಿಧಾನಗಳ ನಡುವಣ ಸೇತುವೆಯಾಗಿದ್ದಾನೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ